ಮಾರ್ಕೋನಿ (ಮಾರ್ಕೀಸ್), ಗೊಲೈಲ್ಮೊ
1874 -1937) ಇಟಲಿಯ ವಿದ್ಯುತ್ ಇಂಜನಿಯರ್ ಜನನ ಬಾಲಾನ್ಯಾ ಎಂಬಲ್ಲಿ 25 ಎಪ್ರೀಲ್ 1874.  ಮರಣ ರೋಮ್‍ನಲ್ಲಿ 1937  ಶ್ರೀಮಂತ ಮನೆತನದಿಂದ ಬಂದ ಮಾರ್ಕೋನಿ ಖಾಸಗಿ ಶಿಕ್ಷಣ ಪಡೆದು ಭೌತ ವಿಜ್ಞಾನದಲ್ಲಿ ಪರಿಣತಿಗಳಿಸಿದ ಹಟ್ರ್ಜ 1886 ರಲ್ಲಿ ಆವಿಷ್ಕರಿಸಿದ ವಿದ್ಯುತ್ ಕಾಂತ ತರಂಗಗಳನ್ನು ಕುರಿತು ಒಂದು ಲೇಖನ 1894 ರಲ್ಲಿ ಇವನ ಗಮನಕ್ಕೆ ಬಂತು; ನಿದ್ರ್ರವ್ಯತೆಯಲ್ಲಿ ತಂತಿ ಮುಂತಾದ ಯಾವ ಮಾದ್ಯಮದ ನೆರವೂ ಇಲ್ಲದೆ ಬೆಳಕಿನ ವೇಗದಿಂದ ಸಾಗುವ ಶಕ್ತಿ ವಿಶೇಷವಿದು. ಅಂದಮೇಲೆ ಸಂಜ್ಞೆಗಳ ರವಾನೆಗೆ ಈ ತರಂಗಗಳನ್ನು ಉಪಯೋಗಿಸಬಹುದಲ್ಲವೇ? ಹೀಗೆ ಪರಿಭಾವಿಸಿದ ಮಾರ್ಕೋನಿ ರೇಡಿಯೋ ತರಂಗಗಳನ್ನು ಹಟ್ರ್ಜ ವಿಧಾನದಿಂದ ಉತ್ಪಾದಿಸಿದ ಮತ್ತು ಇವನು ಪತ್ತೆ ಹಚ್ಚಲು ಕೊಹಿರರ್ ಎಂಬ ಸಲಕರಣೆಯನ್ನು ಬಳಸಿದ. ತೀರಾ ಅಳ್ಳಕವಾಗಿ ಪೇರಿದ ಲೋಹ ರೇಕುಗಳ ಧಾರಕವೇ ಕೋಹಿರರ್. ಸಾಧಾರಣವಾಗಿ ಇದು ಅತ್ಯಲ್ಪ ವಿದ್ಯುತ್ತನ್ನು ಪ್ರವಹಿಸಗೊಡುತ್ತಿತ್ತು. ಆದರೆ ರೇಡಿಯೋ ತರಂಗಗಳು ಇದರ ಮೇಲೆ ಬಿದ್ದಾಗ ಸಾಕಷ್ಟು ವಿದ್ಯುತ್ ಪ್ರವಹಿಸುತ್ತಿತ್ತು. ಈ ತರನಾಗಿ ರೇಡಿಯೋ ತರಂಗಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾದ ವಿದ್ಯುತ್ ಪ್ರವಾಹವಾಗಿ ಪರಿವರ್ತಿಸುವುದು ಸಾಧ್ಯವಾಯಿತು. 

	ಕ್ರಮೇಣ ಮಾರ್ಕೋನಿ ತನ್ನ ಉಪಕರಣಗಳಲ್ಲಿ ಸುಧಾರಣೆಗಳನ್ನು ತಂದ ಪ್ರೇಷಕ (ಟ್ರಾನ್ಸ್‍ಮಿಟರ್) ಮತ್ತು ಅಭಿಗ್ರಾಹಕ (ರಿಸೀವರ್) ಎರಡನ್ನೂ ಭೂಸಂಪರ್ಕ ಗೊಳಿಸಿದ. ಅಲ್ಲದೇ ಭೂಸಂಪರ್ಕರಹಿತ ತಂತಿಯೊಂದನ್ನು ಆಂಟೆನಾವಾಗಿ ಉಪಯೋಗಿಸುತ್ತ ಪ್ರೇಷಣೆಯನ್ನೂ ಅಭಿಗ್ರಹಣೆಯನ್ನೂ ಸುಲಭಮಾಡಿದ. ಆಂಟೆನಾದ ಉಪಯೋಗವನ್ನು ಮೊದಲು ಬಳಕೆಗೆ ತಂದವ ರಷ್ಯದ ಭೌತವಿಜ್ಞಾನಿ ಅಲೆಕ್ಸಾಂಡರ್ ಸ್ಟೆಪನೊವಿಚ್ ಪೊಪೊವ್ (1859-1904).

ರೇಡಿಯೊ ತರಂಗಗಳ ಪ್ರೇಷಣೆ ಮತ್ತು ಅಭಿಗ್ರಹಣೆ ಪ್ರಾಯೋಗಿಕ ಯಶಸ್ಸು ಗಳಿಸಿದ ಒಡನೆ ಮಾರ್ಕೋನಿ ಎರಡು ಠಾಣೆಗಳ ನಡುವಿನ ಅಂತರವನ್ನು ಹೆಚ್ಚಿಸುತ್ತ ಹೋದ. ಆರಂಭದ ಪ್ರೇಷಣದೂರ ಮನೆಯಿಂದ ತೋಟದವರೆಗೆ ಇತ್ತು (1895). ಅದೇ ಮುಂದಿನ ಪ್ರಯೋಗದಲ್ಲಿ ಈ ಅಂತರ 1.6 ಕಿಮೀ ನಷ್ಟು ಅಧಿಕವಾಗಿತ್ತು. ಮರುವರ್ಷ (1896) ಇದು 14.4 ಕಿಮೀ ಆಗಿತ್ತು-ಅಂದರೆ ಅನುಭವ ಹಾಗೂ ಪ್ರಯೋಗಗಳಿಂದ ಉಪಕರಣಗಳಲ್ಲಿ ಸುಧಾರಣೆ ತರಲಾಯಿತು ಎಂದರ್ಥ. 1897ರಲ್ಲಿ ಇದು 19.2 ಕಿಮೀ 1898ರಲ್ಲಿ 28.8 ಕಿಮೀ.

ಈ ತೆರನಾಗಿ ತನ್ನ ಉಪಕರಣಗಳನ್ನೂ ವಿಧಾನಗಳನ್ನೂ ಕ್ರಮಶಃ ಸುಧಾರಿಸಿದ ಮಾರ್ಕೋನಿ ಈಗ ಅವನ್ನು ವಾಣಿಜ್ಯಾತ್ಮಕವಾಗಿ ಅಭಿವರ್ಧಿಸಲು ಯೋಜಿಸಿದ. ವೃದ್ಧಭೌತವಿಜ್ಞಾನಿ ಕೆಲ್ವಿನ್ (1824-1907), ಇನ್ನೊಬ್ಬ ಹಿರಿಯ ವಿಜ್ಞಾನಿ ಸ್ಟೋಕ್ಸ್ (1819-1903) ಎಂಬಾತನಿಗೆ ಶುಭಾಶಯಗಳನ್ನು ಮಾರ್ಕೋನಿ ಸಂದೇಶ ವಾಹಕದ (ರೇಡಿಯೊ ತರಂಗಗಳು) ಮೂಲಕ ರವಾನಿಸಲು ಹಣಪಾವತಿಸಿದಾಗ ರೇಡಿಯೊ ಪ್ರೇಷಣೆ ಅಧಿಕೃತವಾಗಿ ವಾಣಿಜ್ಯರಂಗಕ್ಕೆ ಕಾಲಿಟ್ಟಿತು (1898-99).

ಮಾರ್ಕೋನಿ ಪ್ರವರ್ತಿಸಿದ ನಾಟಕದ ಅಂತಿಮ ಅಂಕ 1901ರಲ್ಲಿ ತೊಡಗಿತು. ವಿದ್ಯುತ್ಕಾಂತ ತರಂಗಗಳು ಪ್ರೇಷಣ ಕೇಂದ್ರದಿಂದ ನೇರ ಹೊರಕ್ಕೆ ಧಾವಿಸಬೇಕು. ಆದರೆ ಈ ಸಹಜಧರ್ಮಕ್ಕೆ ಅಪವಾದವಾಗಿ ರೇಡಿಯೊ ತರಂಗಗಳು ಭೂಮಿಯ ವಕ್ರತೆಯನ್ನು ಅನುಸರಿಸುತ್ತವೆಂದು ಅವನಿಗೆ ತಿಳಿಯಿತು. ಆದ್ದರಿಂದ ದೂರದ ಎರಡು ನೆಲೆಗಳ ನಡುವೆ ರೇಡಿಯೋ ಸಂಪರ್ಕ ಏರ್ಪಡಿಸಬೇಕಾದರೆ ಆಂಟೆನಾವನ್ನು ಆದಷ್ಟು ಎತ್ತರಕ್ಕೆ ಒಯ್ಯುವುದೊಂದೇ ಮಾರ್ಗವೆಂದು ತೀರ್ಮಾನಿಸಿ ಈ ಕೆಲಸಕ್ಕಾಗಿ ಬಲೂನುಗಳನ್ನು ಉಪಯೋಗಿಸಿದ. ಅದೇ ವರ್ಷದ ಡಿಸೆಂಬರ್ 12 ರಂದು ಮಾರ್ಕೋನಿ ಮಾರ್ಸ್ ಸಂಕೇತವನ್ನು (ಮಾರ್ಸ್ ಕೋಡ್) ಉಪಯೋಗಿಸಿ ಸಂದೇಶಗಳನ್ನು ರವಾನಿಸುವ ವಿಧಾನವನ್ನು ಬಳಕೆಗೆ ತಂದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

1909ರ ಭೌತ ವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕವನ್ನು ಮಾರ್ಕೋನಿಗೆ ಬ್ರೌನ್ (1850-1918) ಜೊತೆ ಕೊಡಲಾಯಿತು.